has gloss | kan: ಕಾಜಿರಂಗ ರಾಷ್ಟ್ರೀಯ ಉದ್ಯಾನವು ಭಾರತದ ಅಸ್ಸಾಂ ರಾಜ್ಯದಲ್ಲಿದೆ. ವಿಶ್ವ ಪರಂಪರೆಯ ತಾಣವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಜಗತ್ತಿನಲ್ಲಿರುವ ಒಟ್ಟು ಏಕ ಕೊಂಬಿನ ಘೇಂಡಾಮೃಗ (ಖಡ್ಗಮೃಗ)ಗಳ ಪೈಕಿ ಮೂರನೆಯ ಎರಡು ಭಾಗಕ್ಕೆ ನೆಲೆಯಾಗಿದೆ. ಗೋಲಾಘಾಟ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಹರಡಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಒಟ್ಟು ವಿಸ್ತೀರ್ಣ ೪೩೦ ಚದರ ಕಿ.ಮೀ.ಗಳಷ್ಟು. ಈ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ ಬಲು ಸಾಂದ್ರವಾಗಿದ್ದು ಇದು ವಿಶ್ವದ ಕಾಪಿಟ್ಟ ಅರಣ್ಯಗಳ ಪೈಕಿ ಅತಿ ಹೆಚ್ಚೆನಿಸಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ೨೦೦೬ರಲ್ಲಿ ಹುಲಿ ಮೀಸಲು ಎಂದು ಘೋಷಿಸಲಾಗಿದೆ. ಇಲ್ಲಿ ಬಲು ದೊಡ್ಡ ಸಂಖ್ಯೆಯಲ್ಲಿ ಆನೆಗಳು, ಕಾಡುಕೋಣಗಳು ಮತ್ತು ಜಿಂಕೆಗಳು ಸಹ ವಾಸವಾಗಿವೆ. ಉಳಿದಂತೆ ಚಿರತೆ, ಮೀನುಗಾರ ಕಾಡುಬೆಕ್ಕು, ಪುನುಗು ಬೆಕ್ಕು, ಸಾಂಬಾರ್ ಜಿಂಕೆ, ಬೊಗಳುವ ಜಿಂಕೆ, ಹೂಲಾಕ್ ಗಿಬ್ಬನ್, ಕಿರೀಟವುಳ್ಳ ಲಂಗೂರ್, ಕರಡಿ ಮತ್ತು ಗಂಗಾ ಡಾಲ್ಫಿನ್‍ಗಳು ಸಹ ಈ ಪ್ರದೇಶದಲ್ಲಿ ನೆಲೆಸಿವೆ. ವಿಶ್ವದ ಒಂದು ಪ್ರಮುಖ ಪಕ್ಷಿನೆಲೆಯಾಗಿ ಸಹ ಇದನ್ನು ಗುರುತಿಸಲಾಗಿದೆ. ಪೂರ್ವ ಹಿಮಾಲಯದ ಜೈವಿಕ ಕ್ರಿಯಾಕೇಂದ್ರದ ಅಂಚಿನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ದೊಡ್ಡ ಪ್ರಮಾಣದಲ್ಲಿ ಜೀವವೈವಿಧ್ಯವನ್ನು ತೋರುತ್ತದೆ. |