has gloss | kan: ಸಂತ ಮೇರಿ ಬೆಸಿಲಿಕಾ ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬದಿಯಲ್ಲೇ ಇರುವ ಪ್ರಾಚೀನ ಹಾಗು ಬೆಂಗಳೂರಿನ ಅತ್ಯಂತ ಹಳೆಯ ಚರ್ಚ್ ಆಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಇಲ್ಲಿ ನಡೆಯವ ಜಾತ್ರೆ ಅತ್ಯಂತ ಹೆಸರುವಾಸಿಯಾಗಿದ್ದು, ಹಬ್ಬಕ್ಕೆ ಮುಂಚಿನ ಎಂಟು ದಿನಗಳಲ್ಲೂ ಭಕ್ತರ ಯಾತ್ರೆ ಇರುತ್ತದೆ. ಇಡೀ ದಿನ ಎಲ್ಲೆಲ್ಲಿಂದಲೋ ಬಂದ ಭಕ್ತರ ಮಹಾಪೂರ ಸಂಜೆಯಾಗುತ್ತಿದ್ದಂತೆಯೇ ಉತ್ತುಂಗಕ್ಕೇರುತ್ತದೆ. ಮೇರಿ ಮಾತೆಗೆ ಹರಕೆಯೊಪ್ಪಿಸಲು ಏನೆಲ್ಲ ವೇಷಗಳು. ಇತ್ತೀಚೆಗಂತೂ ಕಾವಿಯ ಭರಾಟೆ ಜೋರಾಗಿದೆ. ಕಾವಿಯ ಶರ್ಟು ಪೈಜಾಮ, ಕಾವಿಯ ಸೀರೆ, ಕಾವಿಯ ಸೆಲ್ವಾರ್ ಕಮಿಜ್ ಗಳನ್ನು ತೊಟ್ಟವರ ಸಂಖ್ಯೆ ಬಹಳವಾಗಿದೆ. ಇಷ್ಟಾರ್ಥ ಕೈಗೂಡಲೆಂದೋ, ಕೆಲಸ ಸಿಗಲೆಂದೋ, ಮಕ್ಕಳಾಗಲೆಂದೋ, ಒಟ್ಟಿನಲ್ಲಿ ಯಾವುದೋ ನೆಪದಿಂದ ಜನ ಇಲ್ಲಿ ಧಾವಿಸಿ ಬರುತ್ತಾರೆ. ಮೋಂಬತ್ತಿ ಹಿಡಿದು ಸರತಿ ಸಾಲಿನಲ್ಲಿ ನಿಂತು ಮೇರಿ ಮಾತೆಯ ದರ್ಶನ ಪಡೆಯುತ್ತಾರೆ. ಕೆಲವರು ಉರುಳು ಸೇವೆಯನ್ನೂ ಮಾಡುತ್ತಾರೆ. ಕೆಲವರಂತೂ ಸಮೂಹಸನ್ನಿಗೊಳಗಾದವರಂತೆ ಬಿಕ್ಷುಕರ ಸಾಲಿನಲ್ಲಿ ನಿಂತು ಬಿಕ್ಷೆಯನ್ನೂ ಬೇಡುತ್ತಾರೆ. |